ರುಕ್ಮಿಣೀದೇವಿ, ಅರುಂಡೇಲ್
1904-86. ಪ್ರಖ್ಯಾತ ಭರತನಾಟ್ಯ ಕಲಾವಿದೆ. ಭಾರತೀಯ ಸಂಸ್ಕøತಿಯನ್ನು ಭಾರತದ ಹೊರಗೂ ಪ್ರಚಾರ ಮಾಡಿದವರು; ಭರತನಾಟ್ಯದ ಪುನರುತ್ಥಾನ ಮಾಡಿ ಅದಕ್ಕೊಂದು ಸ್ಥಾನಮಾನ ಕಲ್ಪಿಸಿದರು.

ಇವರು 1904 ಫೆಬ್ರವರಿ 29 ರಂದು ಜನಿಸಿದರು. ಇವರ ತಾಯಿ ಶೇಷಮ್ಮಾಳ, ಪ್ರಗತಿಪರರು. ತಂದೆ ಎ. ನೀಲಕಂಠಶಾಸ್ತ್ರಿ ಒಬ್ಬ ಎಂಜಿನಿಯರ್. ಸುಸಂಸ್ಕøತ ಸಾಹಿತಿ, ಥಿಯೋಸೋಫಿಸ್ಟ್. ಇಂಥ ಮನೆತನದಲ್ಲಿ ಹುಟ್ಟಿದ ಇವರು ಸಹಜವಾಗಿಯೇ ಚಿಕ್ಕಂದಿನಿಂದಲೂ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಭಾರತಕ್ಕೆ ಅನಿಬೆಸೆಂಟರ ಶಿಷ್ಯರಾಗಿ ಬಂದಿದ್ದ ಆಸ್ಟ್ರೇಲಿಯಾದ ಯೋಸೋಫಿಸ್ಟ್ ಮತ್ತು ಶಿಕ್ಷಣತಜ್ಞ ಜಾರ್ಚ್ ಅರುಂಡೇಲ್ ಅವರನ್ನು ವಿವಾಹವಾಗಿ(1920), ಆ ಕಾಲಕ್ಕೆ ಊಹೆಗೂ ಮೀರಿದ ಬಂಡಾಯ ಮಾಡಿದರು. ಆಸ್ಟ್ರೇಲಿಯಕ್ಕೆ ಹೋಗಿದ್ದಾಗ (1926) ಪ್ರಖ್ಯಾತ ಬ್ಯಾಲೆ ನಟಿ ಎನ್ನಾಪವ್‍ಲೋವಾ ಅವರ ನೃತ್ಯವನ್ನು ನೋಡಿ ಪ್ರಭಾವಿತರಾದರು. ಆಕೆಯೇ ರುಕ್ಮಿಣಿಯವರಿಗೆ ಚೈತನ್ಯ ಪೂರ್ಣಗುರು. ಬಾಲ್ಯದಲ್ಲಿ ವೀಣಾ ವೈದ್ಯನಾಥ ಅಯ್ಯರ್‍ರಿಂದ ಸಂಗೀತ ಶಿಕ್ಷಣ ಪಡೆದಿದ್ದರು, ಕ್ಲಿಯೋನೋರ್ಡಿ ಅವರಿಂದ ಬ್ಯಾಲೆ ಕಲಿತರು. 1932ರಲ್ಲಿ ಮೈಲಾಪುರ ಗೌರಿ ಅಮ್ಮಾಳ್ ಮತ್ತು ಮೀನಾಕ್ಷಿ ಸುಂದರಂ ಪಿಳ್ಳೆಯವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿದರು. 1936ರಲ್ಲಿ ನಡೆದ ಇವರ ಮೊದಲ ಪ್ರದರ್ಶನ ಕಟ್ಟಾ ಸಂಪ್ರದಾಯವಾದಿಗಳನ್ನು ತಲೆದೂಗಿಸಿತು.

ಇವರ ಮಹತ್ತ್ವದ ಸಾಧನೆ ಕಲಾಕ್ಷೇತ್ರ. 1936 ಜನವರಿ 6ರಂದು ಮದರಾಸಿನ ಥಿಯೋಸೋಫಿಕಲ್ ಸೊಸೈಟಿಯ ಆವರಣದಲ್ಲಿ ಗುಡಿಸಿಲುಗಳಲ್ಲಿ ಆರಂಭಿಸಿದ ಇಂಟರ್‍ನ್ಯಾಷನಲ್ ಅಕಾಡೆಮಿ ಆಫ್  ಆಟ್ರ್ಸ್ ಕಲಾಕ್ಷೇತ್ರವಾಗಿ ಬೆಳೆದು ಹೆಮ್ಮರವಾಯಿತು. ಭರತನಾಟ್ಯ, ಕಥಕ್ಕಳಿ, ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಚಿತ್ರಕಲೆ, ನಾಟಕ ಮುಂತಾದ ಕಲೆಗಳ ಶುದ್ಧರೂಪದ ಪುನರುಜ್ಜೀವನ ಮತ್ತು ಅಧ್ಯಯನ ಅದರ ಗುರಿಯಾಗಿತ್ತು. ಜಾಗತಿಕ ಕಲಾವಿದರನ್ನು ಅದು ಆಕರ್ಷಿಸಿತು. ಸದಿರ್ ಮತ್ತು ಚಿನ್ನಮೇಳಂ ಎಂಬ ಹೆಸರಿನಲ್ಲಿದ್ದ ನೃತ್ಯಕ್ಕೆ ಭರತನಾಟ್ಯಂ ಎಂಬ ಹೆಸರಿಟ್ಟು ಅದರ ಸ್ಥಾನಮಾನವನ್ನು ಏರಿಸಿದವರು ರುಕ್ಮಿಣೀದೇವಿ. ಇವರಿಂದಾಗಿ ಈ ಕಲೆ ಭಾರತಾದ್ಯಂತ ಪ್ರಚಾರಗೊಂಡಿತು. ರಂಗಸಜ್ಜಿಕೆ, ಹಿಮ್ಮೇಳ ಕೊಡುವರೀತಿ, ನರ್ತಕಿಯ ವಸ್ತ್ರ ರಚನೆ, ಬೆಳಕಿನ ಉಪಯೋಗ-ಇವೆಲ್ಲದರ ನಿರ್ವಹಣೆ, ಸುಧಾರಣೆ ಇವರದ್ದೇ. ಇವರ ಸಂಸ್ಕøತ ಪಾಂಡಿತ್ಯ, ಸಂಗೀತ ಪ್ರೌಢಿಮೆ, ಕಲೆಯ ಎಲ್ಲ ಪ್ರಕಾರಗಳಲ್ಲಿಯ ಆಸಕ್ತಿ, ಚಿಂತನ ಶೀಲತೆ ಈ ಕಲೆ ಯನ್ನು ಶ್ರೀಮಂತಗೊಳಿಸಿತು. ಕಲಾವಿದರ ತಂಡದೊಂದಿಗೆ ಪ್ರದರ್ಶನಕ್ಕಾಗಿ ಇಲ್ಲವೆ ಉಪನ್ಯಾಸಕ್ಕಾಗಿ ಇವರು ಜಗತ್ತಿನಾದ್ಯಂತ ಸಂಚರಿಸಿ ದರು. 

ಇವರ ನೃತ್ಯಪ್ರದರ್ಶನ ಗಳು ಒಂದು ದಶಕದ ಕಾಲ ಅವ್ಯಾಹತವಾಗಿ ನಡೆದುವು. ಅಲ್ಲದೆ ಸಂಸ್ಕøತ, ತಮಿಳು, ತೆಲುಗು, ಬಂಗಾಲಿಯಲ್ಲಿ ಅನೇಕ ನೃತ್ಯನಾಟಕಗಳನ್ನು ರಚಿಸಿ, ನಿರ್ದೇಶಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿದರು. ಸಾಂಪ್ರದಾಯಿಕ, ಶಾಸ್ತ್ರೋಕ್ತ ತಳಹದಿಯ ಮೇಲೆ ನೃತ್ಯನಾಟಕಗಳನ್ನು ರಚಿಸುವುದಕ್ಕೂ ಇವರದೇ ಮೇಲ್ಪಂಕ್ತಿಯಾಯಿತು. 1944ರಲ್ಲಿ ರಚಿಸಿ ಪ್ರದರ್ಶಿಸಿದ ಕುಟ್ರಾಲಕುರವಂಜಿಯಿಂದ ಪ್ರಾರಂಭವಾಗಿ 1984ರ ಮೇವಾರದ ಮೀರಾ ವರೆಗೆ 25 ಗೀತನಾಟಕಗಳನ್ನು ರಚಿಸಿ ವೇದಿಕೆಗೆ ತಂದರು. ಇವುಗಳಲ್ಲಿ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ಸೀತಾಸ್ವಯಂವರದಿಂದ ಮಹಾಪಟ್ಟಾಭಿಷೇಕದ ವರೆಗಿನ 6 ನೃತ್ಯನಾಟಕಗಳು ಇವರ ಮೇರುಕೃತಿಗಳೆನಿಸಿವೆ. ಇವುಗಳ ಜೊತೆಗೆ ಪ್ರದರ್ಶಿಸಿದ್ದು 4 ಭಾಗವತ ಮೇಳಗಳು, 3 ಕುರವಂಜಿ, 12 ಇತರ ನೃತ್ಯ ನಾಟಕಗಳು. ತಮ್ಮ ಜೀವಿತದ ಕಡೆಯ ದಿನಗಳಲ್ಲೂ ರಾಮಚರಿತ ಮಾನಸ ಕ್ಕೆ ಸಂಬಂಧಿಸಿದ ನೃತ್ಯನಾಟಕವನ್ನು ರಚಿಸುವ ಕನಸು ಇವರಿಗಿತ್ತು.

ಅಪಾರ ಪ್ರಾಣಿದಯೆ ಇದ್ದ ಉದಾರವಾದಿ ಈಕೆ. ಪಶುಕಲ್ಯಾಣ ಸಮಿತಿಯ ಅಧ್ಯಕ್ಷಿಣಿಯಾಗಿದ್ದರು. ಇವರ ಪ್ರಯತ್ನದಿಂದಾಗಿ ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧದ ಶಾಸನವಾಯಿತು. ಈ ಕ್ಷೇತ್ರದಲ್ಲಿ ಇವರ ಸಾಧನೆಗಾಗಿ ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಎಂಬ ಸಂಸ್ಥೆ ಕ್ವೀನ್ ವಿಕ್ಟೋರಿಯಾ ಸಿಲ್ವರ್ ಮೆಡಲ್ ನೀಡಿತು. 1934ರಲ್ಲಿ ತಮ್ಮ ಪತಿಯೊಡನೆ ಬೆಸೆಂಟ್ ಥಿಯೋಸೊಫಿಕಲ್ ಸ್ಕೂಲ್ ಪ್ರಾರಂಭಿಸಿದರು. ಮೇಡಂ ಮೇರಿಯಾ ಮಾಂಟೆಸೂರಿ ಎಂಬವರನ್ನು ಆಹ್ವಾನಿಸಿ ಭಾರತದಲ್ಲಿ ಮಾಂಟೆಸೂರಿ ಶಿಶು ಶಿಕ್ಷಣಕ್ಕೆ ಬಾಗಿಲು ತೆರೆದವರು ಇವರು. ಕಲಾಕ್ಷೇತ್ರದಲ್ಲಿ ನೇಯ್ಗೆಯ ವಿಭಾಗವೂ ಇದ್ದು ಕೈಮಗ್ಗ ಮತ್ತು ಕರಕುಶಲ ಕಲೆಗೆ ಪ್ರೋತ್ಸಾಹ ದೊರೆಯಿತು.

ಬಹುಮುಖ ಸೇವೆ ಮಾಡಿದ ಇವರು ಸಂಪ್ರದಾಯಗಳನ್ನು ದಾಟಿ ಮುಂದೆ ಹೋದರೂ ಅದು ಬಂಡಾಯಕ್ಕಾಗಿ ಮಾಡಿದ ಬಂಡಾಯವಾ ಗಿರಲಿಲ್ಲ. ಬದುಕಿನ ಆಳವಿಸ್ತಾರಗಳ ಅನ್ವೇಷಣೆಯ ಸವಾಲನ್ನು ಎದುರಿ ಸಿದ ರೀತಿ ಅದಾಗಿತ್ತು. ತಮ್ಮ ಮನೋದಾರ್ಢ್ಯ ಚಲಗಳಿಂದಾಗಿಯೇ ಭಾರತದ ಸಾಂಸ್ಕøತಿಕ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಇವರು ಬೆಳೆದರು. ರಾಜ್ಯಸಭೆಯ ನಾಮಕರಣ ಸದಸ್ಯೆ (1952-59) ಆಗಿದ್ದ ರುಕ್ಮಿಣೀದೇವಿ ಯವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ (1956) ಅನೇಕ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಬಹುಮಾನಗಳು ಸಂದಿವೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೃತ್ಯಕ್ಕಾಗಿ ನೀಡಿದ ಪ್ರಶಸ್ತಿ(1957), ಶಾಂತಿನಿಕೇತನದ ದೇಶಿಕೋತ್ತಮ(1972), ಬೆನಾರಸ್ ವಿಶ್ವವಿದ್ಯಾಲ ಯದ ಗೌರವ ಡಾಕ್ಟೊರೇಟ್ ಪದವಿ (1982), ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಪ್ರಶಸ್ತಿ(1984), ವೇನ್ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪದವಿ,-ಅವುಗಳಪೈಕಿ ಕೆಲವು. ತಮ್ಮ ಜೀವನದ ಉಸಿರಾದ ಕಲಾಕ್ಷೇತ್ರದಿಂದ ದೂರವಾಗಲು ಇಷ್ಟಪಡದೆ ರಾಷ್ಟ್ರಪತಿಯಾಗಲು ಬಂದ ಅಹ್ವಾನವನ್ನು (1977) ನಿರಾಕರಿಸಿದ್ದ ಇವರು 1986 ಫೆಬ್ರವರಿ 24 ರಂದು ನಿಧನ ಹೊಂದಿದರು.	           
 (ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ